ಫಿನಾಲ್‍ಫ್ತಲೀನ್ -
ಟ್ರೈಫಿನೈಲ್ ಮೀಥೇನಿನಿಂದ ಉತ್ಪತ್ತಿಯಾದ ಫ್ತಾಲೀನ್ ವರ್ಣಗಳ ಗುಂಪಿಗೆ ಸೇರಿದ ಒಂದು ಇಂಗಾಲಸಂಯುಕ್ತ. 1871ರಲ್ಲಿ ಬೇಯರ್ ಎಂಬಾತ ಪೈರೊಗಲಾಲನ್ನು ಫ್ತಾಲಿಕ್ ಅನ್‍ಹೈಡ್ರೈಡಿನೊಡನೆ 195º-200ºಅ ಉಷ್ಣತೆಯಲ್ಲಿ ಕಾಸಿದಾಗ ಕೆಂಪು ಸಂಯುಕ್ತವನ್ನು ಪಡೆದ. ಇದನ್ನು  ಅವನು ಗ್ಯಾಲೀನ್ ಎಂದು ಕರೆದ. ಇದೇ ರೀತಿಯಲ್ಲಿ ಫಿನಾಲ್, ಫ್ತಾಲಿಕ್ ಆನ್‍ಹೈಡ್ರೈಡ್ ಇವುಗಳ ಮಿಶ್ರಣವನ್ನು ಸಾರ ಗಂಧಕಾಮ್ಲದ ಅಥವಾ ಶುಷ್ಕ ಜಿಂಕ್ ಕ್ಲೋರೈಡಿನ ಸಂಪರ್ಕದಲ್ಲಿ ಸುಮಾರು 1200ºಅ ಉಷ್ಣತೆಯಲ್ಲಿ ಕಾಸಿದಾಗ ನಿರ್ವರ್ಣ ಸಂಯುಕ್ತ ದೊರೆಯಿತು. ಇದನ್ನು ಫಿನಾಲ್‍ಫ್ತಲೀನ್ ಎಂದು ಕರೆದ. ಮೂರು ಬೆನ್‍ಜೀನ್ ಉಂಗುರಗಳುಳ್ಳ ಈ ಸಂಯುಕ್ತ ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಕೆಂಪುಬಣ್ಣವುಳ್ಳದ್ದಾಗಿರುತ್ತದೆ.
ಎರಡು ಕಾರಣಗಳಿಂದ ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಈ ಸಂಯುಕ್ತವನ್ನು ಹಾಕಿದಾಗ ಕೆಂಪು ಬಣ್ಣ ಬರುವುದಾಗಿದೆ: 1 ಒಂದು ಬೆನ್‍ಜೀನ್ ಉಂಗುರ ಕ್ವಿನೊನಾಯ್ಡ್ ಆಗಿ ತಿರುಗುವುದು, 2 ಬಣ್ಣವಿಲ್ಲದ ಫಿನಾಲ್‍ಫ್ತಲೀನ್ ಲ್ಯಾಕ್ಟೋನಿನಲ್ಲಿ ಬೆಂಜೀನ್ ಉಂಗುರಗಳು ಮಾತ್ರ ಅನುರಣನೆಯನ್ನು ಪಡೆದಿರುವುದು. ಆದರೆ ಡೈಸೋಡಿಯಮ್ ಲವಣದಲ್ಲಿ ಅತ್ಯಧಿಕ ಅನುರಣನೆಪಡೆದಿರುವುದು. ಇದನ್ನು I ಮತ್ತು II ರಚನೆಗಳಲ್ಲಿ ಕಾಣಬಹುದು.

	ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣ ಹೆಚ್ಚಿಗೆ ಇದ್ದಾಗ ಫಿನಾಲ್‍ಫ್ತಲೀನ್ ಸಂಯುಕ್ತ ತನ್ನ ಬಣ್ಣ ಕಳೆದುಕೊಂಡು ಟ್ರೈಸೋಡಿಯಮ್ ಲವಣ ಕೊಡುತ್ತದೆ. ಕ್ವಿನೊನಾಯ್ಡ್ ರಚನೆಯನ್ನು ಕಳೆದುಕೊಳ್ಳುವುದರಿಂದ ಬಣ್ಣರಹಿತವಾಗಿರುವುದು. 261ºಅ ಉಷ್ಣತೆಯಲ್ಲಿ ದ್ರವಿಸುವ ಸ್ಛಟಿಕಾಕೃತಿಯ ಈ ಸಂಯುಕ್ತ ನೀರಿನಲ್ಲಿ ಲೀನವಾಗುವುದಿಲ್ಲ. ಇದು ಕ್ಷಾರಗಳಲ್ಲಿ ಲೀನವಾಗಿ ಕೆಂಪು ಬಣ್ಣ ಕೊಡುವುದು. ಆಮ್ಲಗಳಲ್ಲಿ ಇದು ನಿರ್ವರ್ಣ. ಆಮ್ಲ ಪ್ರತ್ಯಾಮ್ಲ ಗಾತ್ರಾತ್ಮಕ ಪ್ರಯೋಗಗಳಲ್ಲಿ ಇದನ್ನು ಸೂಚಕವಾಗಿ ಉಪಯೋಗಿಸುವರು.

ವಿರೇಚಕವಾಗಿಯೂ ಇದರ ಉಪಯೋಗ ಉಂಟು. ಇದರ ಟೆಟ್ರಅಯಡೊ ಸಂಯುಕ್ತವನ್ನು ಅಯಡೊಫಾರಮ್ ಬದಲಾಗಿ ಉಪಯೋಗಿಸುತ್ತಾರೆ.

ವೈದ್ಯಕೀಯದಲ್ಲಿ ಬಳಕೆ : ಫಿನಾಲ್‍ಫ್ತಲೀನನ್ನು ಪಾಶ್ಚಾತ್ಯ ವೈದ್ಯಕೀಯದಲ್ಲಿ ವಿರೇಚಕವಾಗಿ ಬಳಸಲಾಗುತ್ತದೆ. ಇದರ ಭೇದಿಕಾರಕ ಗುಣ ಆಕಸ್ಮಾತ್ತಾಗಿ ಗೊತ್ತಾಯಿತು. 

ಚಿತ್ರ-1

ಹಂಗೇರಿ ಸರಕಾರ ಕೃತಕ ಮದ್ಯಸಾರಗಳ (ಆರ್ಟಿಪಿಷಿಯಲ್ ವೈನ್ಸ್) ಗುರುತಿಗಾಗಿ ಅವಕ್ಕೆ ಸೇರಿಸಬಹುದಾದ ಯಾವುದಾದರೂ ಕ್ಷೇಮವಾದ ಸೂಚನವಸ್ತುಗಳನ್ನು ಆವಿಷ್ಕರಿಸಬೇಕೆಂದು ಕರೆಕೊಟ್ಟಾಗ ವ್ಯಾಮೋಸ್ಸಿ ಎಂಬಾತ 1902ರಲ್ಲಿ ಫಿನಾಲ್‍ಫ್ತಲೀನನ್ನು ಬಳಸಿ ಕೃತಕ ಮದ್ಯಸಾರಗಳಿಗೆ ಕೆಂಪು ಬಣ್ಣ ಕೊಟ್ಟನೆಂದೂ ಅಂಥ ಮದ್ಯಸಾರ ಕುಡಿದವರು ಒಂದೆರಡು ಬಾರಿ ಭೇದಿ ಮಾಡುತ್ತಿದ್ದರೆಂದೂ ತಿಳಿಯಿತು.

ಚಿತ್ರ-2

 	ಮುಂದೆ ನಡೆಸಲಾದ ವ್ಯಾಸಂಗಗಳಿಂದ ಫಿನಾಲ್‍ಫ್ತಲೀನ್ ನಿಜವಾಗಿ ಒಂದು ಕ್ಷೇಮಕಾರಿ ವಿರೇಚಕ ಎಂದು ತಿಳಿದುಬಂದದ್ದರಿಂದ ಔಷಧವಾಗಿ ಬಳಕೆಗೆ ಬಂದಿತು. ಇದರಲ್ಲಿ ರುಚಿ, ಬಣ್ಣ, ವಿಷಗುಣಗಳೂ ಯಾವುವೂ ಎತ್ತಿ ಹೇಳುವಷ್ಟು ಇಲ್ಲದಿರುವುದರಿಂದ ಇದು ಮಾರುಕಟ್ಟೆಯಲ್ಲಿಯ ಹಲವಾರು ವಿರೇಚಕ ಔಷಧಗಳ ಮುಖ್ಯ ಘಟಕವಾಗಿರುತ್ತದೆ. ನೀರಿನಲ್ಲಿ ಲೀನಿಸುವ ಪ್ರಮಾಣ ಅತ್ಯಲ್ಪವಾದ್ದರಿಂದ ಮದ್ಯಸಾರದಲ್ಲಿ ಲೀನಿಸಿದ ದ್ರಾವಣ ರೂಪದಲ್ಲೊ ಪುಡಿ ಅಥವಾ ಗೋಲಿರೂಪದಲ್ಲೊ ಇದನ್ನು ಬಳಸುವುದಿದೆ.

ಚಿತ್ರ-3

 ಸಾಮಾನ್ಯವಾಗಿ 0.1-0.2 ಗ್ರಾಮ್‍ಗಳಷ್ಟು ಪರಿಮಾಣ ಸುಖಭೇದಿಕಾರಕ. ಗೋಲಿ ಗಾತ್ರದಲ್ಲಿ ಸಾಮಾನ್ಯವಾಗಿ 60 ಮಿಲಿಗ್ರಾಮ್‍ಗಳಷ್ಡು ಫಿನಾಲ್‍ಫ್ತಲೀನ್ ಇರುತ್ತದೆ. ಔಷಧರೂಪದಲ್ಲಿ ತೆಗೆದುಕೊಂಡ ಫಿನಾಲ್‍ಫ್ತಲೀನ್ ಸಣ್ಣ ಕರುಳಿನಲ್ಲಿರುವ ಕರುಳು ರಸ ಪಿತ್ರರಸಗಳಲ್ಲಿ ಲೀನವಾಗಿ ಸೇವಿಸಿದ್ದರಲ್ಲಿ ಸುಮಾರು 15% ರಕ್ತಗತವಾಗುತ್ತದೆ. ಮಿಕ್ಕಿದ್ದು ಕರುಳಿನ ಮೂಲಕ ಸಾಗುವಾಗ (ಔಷಧ ತೆಗೆದುಕೊಡು 4-8 ಗಂಟೆಗಳಲ್ಲಿ) ಅದರ-ಮುಖ್ಯವಾಗಿ ದೊಡ್ಡ ಕರುಳಿನ-ಸ್ನಾಯುಗಳನ್ನು ಉದ್ರೇಕಿಸಿ ಕರುಳಿನರಭಸ ಚಲನೆಯನ್ನು ಉಂಟುಮಾಡಿ ಕರುಳಿನ ಒಳಗಿರುವ ಮಲವಸ್ತು ಶೀಘ್ರವಾಗಿ ಮುನ್ನಡೆದು ಗುದನಾಳದ ಮೂಲಕ ವಿಸರ್ಜಿತವಾಗುವಂತೆ ಮಾಡುತ್ತದೆ. ಮಲವಸ್ತು ಶೀಘ್ರವಾಗಿ ಸಾಗುತ್ತಿರುವುದರಿಂದ ಅದರ ದ್ರವಾಂಶ ಹೀರಲ್ಪಡಲು ಕಾಲಾವಕಾಶವಿಲ್ಲದೆ ಅದು ನೀರು ನೀರಾಗಿ ವಿಸರ್ಜಿತವಾಗುತ್ತದೆ. ರಕ್ತಗತವಾದ ಫಿನಾಲ್‍ಫ್ತಲೀನ್ ಪ್ರಮುಖವಾಗಿ ಮೂತ್ರದಲ್ಲಿ ವಿಸರ್ಜಿಸಲ್ಪಡುತ್ತದೆ. ರಕ್ತದ ಫಿನಾಲ್‍ಫ್ತಲೀನ್ ಸ್ವಲ್ಪಮಟ್ಟಿಗೆ ಕರುಳಿನಲ್ಲಿ ವಿಸರ್ಜಿತವಾಗುವುದೂ ಉಂಟು. ಇದು ಕರುಳಿನ ಮೇಲೆ ಪುನಃ ವರ್ತಿಸಿ ಇನ್ನೊಮ್ಮೆ ಭೇದಿ ಆಗುವಂತೆ ಮಾಡಬಹುದು. ಆದ್ದರಿಂದ ಒಂದೇ ಸಲ ಇದನ್ನು ತೆಗೆದುಕೊಂಡರೂ ಎರಡು ದಿವಸ ಭೇದಿ ಆಗುವ ಸಂಭವ ಉಂಟು. ಆದರೆ ಹೆಚ್ಚು ಭೇದಿ ಆಗಿ ಕೈಕಾಲು ಕೆಡುವಂತೆ ಆಗುವುದಿಲ್ಲವಾದ್ದರಿಂದ ಇದು ಕ್ಷೇಮ ಔಷಧವೂ ಆಗಿದೆ. ಮೂತ್ರದಲ್ಲಿ ವಿಸರ್ಜಿತವಾಗುವ ಫಿನಾಲ್‍ಫ್ತಲೀನ್, ಮೂತ್ರ ಪ್ರತ್ಯಾಮ್ಲ ಸ್ವಭಾವದ್ದಾಗಿದ್ದರೆ (ಅಲ್ಕಲೈನ್) ಅದನ್ನು ಕಡುಗೆಂಪಾಗುವಂತೆ ಮಾಡುತ್ತದೆ ಈ ವಿಷಯವನ್ನು ಅರಿತಿದ್ದರೆ ಗಾಬರಿಗೆ ಅವಕಾಶವಿರುವುದಿಲ್ಲ. ಹಾಗೆಯೇ ಮಲದಲ್ಲಿ ವಿಸರ್ಜಿತವಾಗುವ ಸಂದರ್ಭ ಕೂಡ ಗಮನದಲ್ಲಿಡಬೇಕಾದದ್ದು. ವಿಶಿಷ್ಟ ಪರೀಕ್ಷಾ ವಿಧಾನಕ್ಕೆ ಮಲವನ್ನು ಈಡಾಗಿಸಿದಾಗ ಮಲ ರಕ್ತ ಕೂಡಿದ ಮಲದಂತೆ ಕಡುಕೆಂಪಾಗಬಹುದು.

ಆಯೋಡೀನ್ ಜೊತೆ ಸಂಯೋಗಿಸಿದ ಫಿನಾಲ್‍ಫ್ತಲೀನಿನ ಸೋಡಿಯಮ್ ಲವಣವನ್ನು-ಸೋಡಿಯಮ್ ಟೆಟ್ರ ಅಯೊಡೊ ಫಿನಾಲ್‍ಫ್ತಲೀನ್ (ಸ್ವಿಪ್)-ಪಿತ್ತ ಕೋಶದ ಎಕ್ಸ್ ಕಿರಣ ಪರೀಕ್ಷೆಗಾಗಿ ಬಳಸುವುದಿದೆ. ಇದರಿಂದ ಪಿತ್ತಕೋಶದಲ್ಲಿ ಕಲ್ಲುಗಳಿರುವುದು, ಅದರ ನಾಳಕ್ಕೆ ಕಲ್ಲು ಅಡಚಣೆ ಮಾಡಿರುವುದು, ಪಿತ್ತಕೋಶದ ಸಂಕೋಚನ ಸಾಮಥ್ರ್ಯ ಕುಗ್ಗಿರುವುದು ಇತ್ಯಾದಿ ರೋಗಸ್ಥಿತಿಗಳನ್ನು ಪತ್ತೆ ಮಾಡಬಹುದು. ಬ್ರೋಮೀನಿನ ಜೊತೆ ಸಂಯೋಗಿಸಿದ ಸೋಡಿಯಮ್ ಸಲ್ಫೊಬ್ರೋಮಾಫ್ತಲೀನನ್ನು ಯಕೃತ್ತಿನ ಕಾರ್ಯಸಾಮಥ್ರ್ಯ ಪರೀಕ್ಷೆಗಾಗಿ ಬಳಸುತ್ತಾರೆ. ಅಭಿಧಮನಿಯ ಮೂಲಕ ಈ ರಾಸಾಯನಿಕವನ್ನು ಸೂಜಿಮದ್ದಾಗಿ ದೇಹದ ರಕ್ತದಲ್ಲಿ ಇದು ಗಣನೀಯ ಪ್ರಮಾಣದಲ್ಲಿಯೇ ಇದ್ದರೆ ಯಕೃತ್ತಿನ ಸಾಮಥ್ರ್ಯ ಕುಂಠಿತವಾಗಿದೆ ಎಂದು ತಿಳಿಯಬೇಕು.												   (ಎಸ್.ಅರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ